ಉತ್ತರ ಕನ್ನಡ ನೂರಾರು ನೈಸರ್ಗಿಕ ಜಲಪಾತಗಳ ಬೀಡು. ಇಂತಹದ್ದೇ ಒಂದು ಬೇಡ್ತಿ ನದಿಯ ಮಾಗೋಡು ಜಲಪಾತ. ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ ಹಸಿರು ವನ ಸಿರಿಯ ಮಧ್ಯೆ ಹರಿದು ಧುಮುಕುವ ಬೇಡ್ತಿ ಜಲಧಾರೆ ಸುಂದರ ದೃಶ್ಯಕಾವ್ಯ ಎಂದರೆ ತಪ್ಪಿಲ್ಲ ಎರಡು ಹಸಿರ ಪರ್ವತದ ಮಧ್ಯೆ ರಭಸದಿಂದ ನುಗ್ಗುವ ಕೆಂಪಿನ ಜಲಧಾರೆ 3 ಸ್ಥರಗಳಲ್ಲಿ 137 ಮೀಟರ್ ಎತ್ತರದಿಂದ ಕಣಿವೆ ಸೇರುತ್ತದೆ
ಸೌಮ್ಯ, ರಮ್ಯ, ಭವ್ಯ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಧಾರೆಗಳು ತಮ್ಮ ಸೊಬಗಿನಿಂದ ನಿಜಕ್ಕೂ ಹೆಸರಿಗೆ ಅನ್ವರ್ಥಕವೆನಿಸುತ್ತವೆ. ಕೇವಲ ಜಲಧಾರೆಯೊಂದೆ ಕಾಣಸಿಗುವುದಿಲ್ಲ. ಕಣಿವೆಯಲ್ಲಿ ಹರಿಯುವ ನದಿಯ ನೋಟವು ಇದರ ಸೌಂದರ್ಯಕ್ಕೆ ಕಿರೀಟ ತೊಡಿಸಿದಂತೆ ಇರುತ್ತದೆ. ಇದರ ಜೊತೆ ಮಳೆಗಾದಲ್ಲಿ ಅರಣ್ಯ ಮಧ್ಯದ ಅಚ್ಚ ಹಸಿರಿನ ನಡುವೆ ಸುಂದರವಾದ ಇನ್ನೊಂದು ಜಲಧಾರೆ ಕಂಗೊಳಿಸುತ್ತದೆ. ಉತ್ತಮ ರಸ್ತೆ ವಿವಿಧೆಡೆಯಿಂದ ವೀಕ್ಷಿಸಲು ಗೋಪುರಗಳಿವೆ. ಸುಮಾರು 1 ಕಿ.ಮೀ.ಕೆಳಗಿನ ತನಕ ಮೆಟ್ಟಿಲು ಮತ್ತು ಮೇಲೆರಲು 80ಕ್ಕಿಂತ ಹೆಚ್ಚು ಮೆಟ್ಟಿಲು ಹಾಗೂ ವೀಕ್ಷಣಾ ಗೋಪುರದ ವ್ಯವಸ್ಥೆ ಕಲ್ಪಿಸಲಾಗಿದೆ