ಹೊಗೇನಕ್ಕಲ್ ಜಲಪಾತ

ಹೊಗೇನಕ್ಕಲ್ ಜಲಪಾತ

ಹೊಗೇನಕ್ಕಲ್ ಜಲಪಾತ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ಗಡಿಯಲ್ಲಿ ನೆಲೆಸಿದ್ದು, ಕರ್ನಾಟಕದ ಜೀವ ನದಿ ಎಂದೆ ಗುರುತಿಸಲ್ಪಟ್ಟ ಕಾವೇರಿಯಿಂದ ರೂಪಗೊಂಡಿದೆ. ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯಲ್ಲಿ ಬರುವ ಈ ಜಲಪಾತ ಕೇಂದ್ರವು ಕನ್ನಡದ ಪದದಿಂದ ತನ್ನ ಹೆಸರನ್ನು ಪಡೆದಿದೆ. ಅಂದರೆ ಕನ್ನಡ ಹೊಗೆ ಹಾಗೂ ಕಲ್ಲು ಎಂಬ ಎರಡು ಪದಗಳು ಸಂಗಮಗೊಂಡು ಇದು ಹೊಗೇನಕ್ಕಲ್ ಎಂಬ ಹೆಸರು ಪಡೆದಿದೆ.

ಈ ರೀತಿಯಾಗಿ ಹೆಸರು ಬರಲು ಇದಕ್ಕೆ ಕಾರಣವಿದೆ. ಅಂದರೆ ಕಾವೇರಿ ನದಿಯು ಹಲವು ಕವಲುಗಳಲ್ಲಿ ಇಲ್ಲಿ ದೊಡ್ಡ ದೊಡ್ಡ ಬಂಡೆಗಳಿಂದ ಧರೆಗುರುಳಿದಾಗ ಅಕ್ಷರಶಃ ವಾತಾವರಣವು ಹ್ಗೆಯಿಂದ ಕೂಡಿರುವ ರೀತಿಯಲ್ಲಿ ಗೋಚರಿಸುತ್ತದೆ. ಜಲಪಾತದ ನೀರು ಕಾಣದೆ ಬಂಡೆಗಳಿಂದಲೆ ಹೊಗೆಯಾಡಿದ ಹಾಗಿರುತ್ತದೆ. ಆದ್ದರಿಂದಲೆ ಇದಕ್ಕೆ ಹೊಗೇನಕ್ಕಲ್ ಎಂಬ ಹೆಸರು ಬಂದಿದೆ.
ಧರ್ಮಪುರಿಯಲ್ಲಿ ಕಾವೇರಿ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಜಲಪಾತವು ಪಟ್ಟಣದಿಂದ ಕೇವಲ 40 ಕಿ.ಮೀ ಗಳಷ್ಟು ದೂರದಲ್ಲಿದ್ದು ಬೆಂಗಳೂರಿನಿಂದ ಸುಮಾರು 150 ಕಿ.ಮೀ ಗಳಷ್ಟು ದೂರದಲ್ಲಿದೆ. ಇಲ್ಲಿಗೆ ತೆರಳಲು ಸೂಕ್ತವಾದ ಮಾರ್ಗವೆಂದರೆ ಬೆಂಗಳೂರಿನಿಂದ ಹೊಸೂರು, ಕೃಷ್ಣಗಿರಿ, ಧರ್ಮಪುರಿ ಮಾರ್ಗವಾಗಿ ಹೊಗೇನಕ್ಕಲ್ ತಲುಪುವುದು. ಬಾಡಿಗೆ ಅಥವಾ ಸ್ವಂತ ವಾಹನಗಳಿದ್ದರೆ ಅನುಕೂಲ ಇಲ್ಲವೆಂದರೆ ಧರ್ಮಪುರಿಯಿಂದ ಸ್ಥಳೀಯ ವಾಹನಗಳು ದೊರೆಯುತ್ತವೆ. ಬೆಂಗಳೂರಿನಿಂದ ಹೊಸೂರು ಹಾಗೂ ಧರ್ಮಪುರಿಗಳಿಗೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಮಳೆಗಾಲ ಹಾಗೂ ನಂತರದ ಸಮಯ ಈ ಜಲಪಾತ ತಾಣಕ್ಕೆ ಭೇಟಿ ನೀಡಲು ಯೋಗ್ಯವಾಗಿದೆ. ಈ ಸಂದರ್ಭದಲ್ಲಿ ಕಾವೇರಿ ನದಿಯು ನೀರಿನಿಂದ ತುಂಬಿ ಹರಿಯುವ ದೃಶ್ಯ ಎಂಥವರನ್ನೂ ರೋಮಾಂಚನಗೊಳಿಸುತ್ತದೆ. ಉಸಿರು ಬಿಗೆ ಹಿಡಿದು ನೋಡುವಂತೆ ಮಾಡುತ್ತದೆ. ಆದರೆ ಕೇವಲ ಮಳೆಗಾಲವಲ್ಲದೆ ಎಲ್ಲ ಸಮಯದಲ್ಲೂ ಈ ತಾಣಕ್ಕೆ ಭೇಟಿ ನೀಡಬಹುದಾಗಿದೆ. ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ನೀರಿನಲ್ಲಿ ಹೆಚ್ಚು ಪ್ರಭಾವಶಾಲಿ ಅಳೆಗಳಿಲ್ಲದಿರುವ ಕಾರಣ ತೆಪ್ಪ ಸವಾರಿಯ ಆನಂದ ಅನುಭವಿಸಬಹುದು. ಇದು ಸಾಮಾನ್ಯವಾಗಿ ಮಳೆಗಾಲದಲ್ಲಿ ಲಭ್ಯವಿರುವುದಿಲ್ಲ.

ಮಳೆಗಾಲದ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ಹರಿಯುವ ನದಿಗಳಿಂದುಂಟಾದ ಜಲಪಾತಗಳನ್ನು ನೋಡುವ ಆನಂದವೇ ಬೇರೆ. ಇಂತಹ ಆನಂದ ನಿಮ್ಮದಾಗಬೇಕಿದ್ದರೆ ಒಮ್ಮೆ ಹೊಗೇನಕ್ಕಲ್ ಜಲಪಾತಕ್ಕೆ ಭೇಟಿ ನೀಡಿ ಹಾಗೂ ಕಾವೇರಿಯ ರುದ್ರ ನರ್ತನವನ್ನು ನಿಮ್ಮ ಕಣ್ಣಾರೆ ಸವಿದು ಆನಂದ ಪಡೆಯಿರಿ. ಮುಡಿನ ಸ್ಲೈಡುಗಳಲ್ಲಿ ಜಲಪಾತದ ವಿವಿಧ ದೃಶ್ಯಗಳು ನಿಮಗಾಗಿ. ನೋಡಲು ಮರೆಯದಿರಿ.