ಮಂತ್ರಾಲಯ

ಮಂತ್ರಾಲಯ

ಗುರು ರಾಘವೇಂದ್ರ ಸ್ವಾಮಿಯ ಲೀಲೆ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ರಾಘವೇಂದ್ರ ಸ್ವಾಮಿಯನ್ನು ಭಕ್ತಿಯಿಂದ ರಾಯರು ಎನ್ನುತ್ತಾರೆ. ಬಹಳಷ್ಟು ಮಂದಿ ರಾಯರ ಮಠಕ್ಕೆ ಹೋಗಿ ರಾಯರ ದರ್ಶನ ಪಡೆಯುತ್ತಾರೆ. ರಾಯರ ಕೃಪೆಗೆ ಪಾತ್ರರಾದರೆ ನಿಮ್ಮ ಕಷ್ಟಗಳೆಲ್ಲಾ ಕರಗಿ ಹೋಗುತ್ತದೆ ಎನ್ನುತ್ತಾರೆ. ಅದಕ್ಕಾಗಿ ಮಂತ್ರಾಲಯದ ಬಾಗಿಲಿಗೆ ಹೋಗುತ್ತಾರೆ. ಗುರು ರಾಯರ ಮಹಿಮೆ ಅಪಾರ. ಅಂತಹ ಗುರುರಾಯರ ಮಠದ ಬಗ್ಗೆ ಕೆಲವು ವಿಷಯಗಳನ್ನು ನಿಮಗೆ ತಿಳಿಸಲಿದ್ದೇವೆ. ಮಂತ್ರಾಲಯವು ಭಾರತದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಒಂದು ಯಾತ್ರಾ ಹಳ್ಳಿಯಾಗಿದೆ. ಇದು ತುಂಗಭದ್ರ ನದಿಯ ದಂಡೆಯ ಮೇಲಿರುವ ಕರ್ನಾಟಕ ರಾಜ್ಯದ ಗಡಿಯಲ್ಲಿದೆ. ಈ ಗ್ರಾಮವು ರಾಘವೇಂದ್ರ ಸ್ವಾಮಿಯ ವೃಂದಾವನಕ್ಕೆ ಪ್ರಸಿದ್ಧಿಯಾಗಿದೆ.

ರಾಘವೇಂದ್ರ ಗುರುಸಾರ್ವಭೌಮರು ತಮಿಳುನಾಡಿನ ಭುವನಗಿರಿಯಲ್ಲಿ ೧೫೯೫ರಲ್ಲಿ ಮನ್ಮಥ ಸಂವತ್ಸರದಲ್ಲಿ ಜನಿಸಿ, ಮಧ್ವಮತ ಸಂಪ್ರದಾಯವನ್ನು ಅವಲಂಬಿಸಿ ಸಶರೀರರಾಗಿ ಇಲ್ಲಿ ಬೃಂದಾವನಸ್ಥರಾದರು ಎನ್ನಲಾಗಿದೆ. ಪರಿಮಳ ಪ್ರಸಾದ ರಾಯರು ಪರಿಮಳ ಎನ್ನುವ ಗ್ರಂಥವನ್ನು ಬರೆದಿದ್ದಾರೆ. ಈ ಗ್ರಂಥದ ವಿಶ್ವದಲ್ಲೆಡೆ ಪ್ರಸರಿಸಲಿ ಎನ್ನುವ ಕಾರಣದಿಂದ ಇಲ್ಲಿನ ಮಠದ ಪ್ರಸಾದಕ್ಕೆ ಪರಿಮಳ ಪ್ರಸಾದ ಎನ್ನುವ ಹೆಸರನ್ನಿಡಲಾಗಿದೆ. ಈ ಪ್ರಸಾದ ನೋಡಲೂ ಸುಂದರವಾಗಿದೆ. ರುಚಿಕರವೂ ಆಗಿದೆ.

ಇಲ್ಲಿಗೆ ಬರುವ ಭಕ್ತಾದಿಗಳು ತುಂಗಭದ್ರಾ ನದಿಯಲ್ಲಿ ಮಿಂದು ರಾಯರ ಸೇವೆಯನ್ನು ಮಾಡುತ್ತಾರೆ. ಈ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪಡೆಯುತ್ತಾರೆ
ಇಲ್ಲಿ ಪ್ರದಕ್ಷಿಣೆಗಿದೆ ಬಹಳ ಮಹತ್ವ. ಇಲ್ಲಿ ಬರುವ ಪ್ರತಿಯೊಬ್ಬ ಭಕ್ತರು ಪ್ರದಕ್ಷಿಣೆ ಹಾಕುತ್ತಾರೆ. ಕೆಲವರು ಉರುಳು ಸೇವೆ ಮಾಡುತ್ತಾರೆ. ಹೆಜ್ಜೆ ಸೇವೆ ಮಾಡುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ಪ್ರತಿನಿತ್ಯವು ಅನ್ನದಾಸೋಹ ನಡೆಯುತ್ತದೆ.

ತಲುಪುವುದು ಹೇಗೆ ?     ಬೆಂಗಳೂರಿನಿಂದ ಮಂತ್ರಾಲಯಕ್ಕೆ ಸಾಕಷ್ಟು ಬಸ್ ವ್ಯವಸ್ಥೆಗಳಿವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಹೈದರಾಬಾದ್ ವಿಮಾನ ನಿಲ್ದಾಣ ಇದು ಮಂತ್ರಾಲಯಕ್ಕೆ ಸುಮಾರು ೨೮೮ ಕಿ.ಮೀ ದೂರದಲ್ಲಿದೆ. ಸಮೀಪದಲ್ಲಿರುವ ರೈಲು ನಿಲ್ದಾಣವೆಂದರೆ ಮಂತ್ರಾಲಯ ರೈಲು ನಿಲ್ದಾಣ ಇದು ಮಠದಿಂಸ ಸುಮಾರು ೧೨ ಕಿ.ಮೀ ದೂರದಲ್ಲಿದೆ.