ಹಾಸನಾಂಬೆಯ ದೇವಿ

ಹಾಸನಾಂಬೆಯ ದೇವಿ

ಹಾಸನದ ಹಾಸನಾಂಬೆಯ ದೇವಿ ದರ್ಶನ ಸಿಗುವುದು ವರ್ಷಕ್ಕೆ ಕೇವಲ 10-13 ದಿನಗಳು ಮಾತ್ರ. ಪ್ರತಿವರ್ಷ ಅಶ್ವೀಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ದೇವಾಲಯ ಬಾಗಿಲು ತೆರೆದರೆ ಆನಂತರ ದೀಪಾವಳಿಯ ಬಲಿಪಾಡ್ಯಮಿಯಂದು ಮೂರನೇ ದಿನ ಬಾಗಿಲು ಮುಚ್ಚಲಾಗುವುದು. ಈ ಸಮಯದಲ್ಲಿ ಮಾತ್ರ ಭಕ್ತರು ದೇವಿಯ ದರ್ಶನ ಮಾಡಬಹುದು. ದೇವಾಲಯದ ವಿಶೇಷ ಅಂದರೆ ಮುಚ್ಚುವ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹಚ್ಚಿದ ದೀಪ ಒಂದು ವರ್ಷಗಳವರೆಗೆ ಹಾಗೆಯೇ ಉರಿಯುತ್ತಿರುತ್ತದೆ. ಕೊನೆಯ ದಿನ ಪೂಜಿಸಿದ ಹೂವು ಸಹ ಬಾಡದೇ ಇರುವುದು ನಿಜಕ್ಕೂ ಸೋಜಿಗವೆನಿಸುತ್ತದೆ

ಹಾಸನಾಂಬ ದೇವಿ ದೇವಾಲಯದ ಬಾಗಿಲು ತೆಗೆಯುವ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಅಂದು ಒಂದು ರೀತಿಯಲ್ಲಿ ದೊಡ್ಡ ಜಾತ್ರೆ ನಡೆದಷ್ಟೇ ಸಂಭ್ರಮ. ಹಾಸನಾಂಬಾ ದೇಗುಲದ ಬಾಗಿಲು ತೆರೆಯುವ ದಿನ ಇಂದಿಗೂ ತಳವಾರ ಕುಟುಂಬದವರೆಲ್ಲರೂ ಅಲ್ಲಿ ನೆರೆಯುತ್ತಾರೆ. ದೇವಿಯ ಗರ್ಭಗುಡಿಯ ಎದುರಿಗೆ ಅವರೆಲ್ಲರೂ ಒಟ್ಟಾಗಿ ಬಾಳೆಕಂದನ್ನು ನೆಟ್ಟು ಅದನ್ನು ಕತ್ತರಿಸುತ್ತಾರೆ. ಹೀಗೆ ಬಾಳೆ ಕಂದು ಕತ್ತರಿಸಿದ ನಂತರವಷ್ಟೇ ದೇಗುಲದ ಬಾಗಿಲು ತೆರೆಯುವ ವಾಡಿಕೆಯಿದೆ.

ಸ್ಥಳ ಪುರಾಣ

ವಾಯುವಿಹಾರಕ್ಕೆಂದು ಬಂದಿದ್ದ ಸಪ್ತ ಮಾತೃಕೆಯರಲ್ಲಿ ವೈಷ್ಣವಿ, ಮಹೇಶ್ವರಿ ಹಾಗೂ ಕೌಮಾರಿಯರು ಈ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರೆ ಬ್ರಾಹ್ಮೀ ದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸುತ್ತಾಳೆ. ಇನ್ನುಳಿದ ಚಾಮುಂಡಿ, ವಾರಾಹಿ, ಇಂದ್ರಾಣಿಯವರು ನಗರದ ಮಧ್ಯಭಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದರು ಎಂಬುದು ಪುರಾಣಗಳಿಂದ ತಿಳಿದು ಬರುತ್ತದೆ. ಸುತ್ತಮುತ್ತಲಿನ ತಾಲೂಕುಗಳನ್ನು ಚೋಳ ಅರಸರ ಅಧಿಪತಿಯಾದ ಹಕ್ಕಬುಕ್ಕ ನಾಯಕ ಮತ್ತು ಅವನ ವಂಶಸ್ಥರು ಕ್ರಿಶ 11ನೇ ಶತಮಾನದಿಂದ ಒಂದು ಶತಮಾನಕ್ಕೂ ಹೆಚ್ಚು ಕಾಲ ಆಳಿದ್ದಾರೆ ಎಂಬುದು ಚರಿತ್ರೆಯ ಪುಟಗಳಿಂದ ತಿಳಿದು ಬರುತ್ತದೆ. ಹೊಯ್ಸಳರಿಗೂ ಮೊದಲು ಇದು ಗಂಗ ಅರಸರ ಆಳ್ವಿಕೆಯಲ್ಲಿತ್ತು. 11ನೇ ಶತಮಾನದಲ್ಲಿ ಬುಕ್ಕ ನಾಯಕ ತನ್ನ ವಿಜಯೋತ್ಸವದ ನೆನಪಿಗಾಗಿ ಒಂದು ಕೋಟೆಯನ್ನು ಕಟ್ಟಿ ಪಟ್ಟಣಕ್ಕೆ ಚನ್ನ ಪಟ್ಟಣ ಎಂದು ಹೆಸರಿಟ್ಟರಂತೆ. ಬುಕ್ಕ ನಾಯಕನ ವಂಶಸ್ಥರು ನಂತರ ಆ ಪಟ್ಟಣ ಸಂಜೀವ ಕೃಷ್ಣಪ್ಪ ನಾಯಕನೆಂಬುವನಿಗೆ ಸೇರಿತ್ತು ಎಂಬುದಾಗಿ ತಿಳಿದುಬರುತ್ತದೆ. ಈ ನಾಯಕ ಒಮ್ಮೆ ಪ್ರಯಾಣ ಹೊರಟಾಗ ಒಂದು ಮೊಲ ಅಡ್ಡ ಬಂದು ಪಟ್ಟಣದ ಒಳಗೆ ಪ್ರವೇಶಿಸುತ್ತದೆ. ಈ ಅಪಶಕುನದಿಂದ ನಾಯಕ ನೊಂದು ಕೊಂಡನಂತೆ. ಆಗ ಅವನಿಗೆ ಹಾಸನಾಂಬ ದೇವಿಯ ದರ್ಶನವಾಗಿ ಅದೇ ಸ್ಥಳದಲ್ಲಿ ಒಂದು ಕೋಟೆಯನ್ನು ಕಟ್ಟಿ ಅದಕ್ಕೆ ಹಾಸನಾಂಬ ಎಂದು ಹೆಸರಿಡು ಎಂದು ಹೇಳಿ ಅದೃಶ್ಯಳಾಗುತ್ತಾಳೆ. ಹಾಸನವೆಂಬ ಉಲ್ಲೇಖ ಹಾಸನ ತಾಲ್ಲೂಕಿನ ಕುದುರೆ ಗುಂದಿ ಎಂಬ ಗ್ರಾಮದಲ್ಲಿರುವ ಕ್ರಿಶ. 1140ರಲ್ಲಿ ಸ್ಥಾಪಿತವಾದ ವೀರಗಲ್ಲು ಶಿಲಾಶಾಸನದಲ್ಲಿ ಕಾಣುತ್ತದೆ.

ಸಿದ್ದೇಶ್ವರ ದೇವಸ್ಥಾನ

ಸಿದ್ದೇಶ್ವರ ದೇವಾಲಯವು ಹಾಸನಾಂಬೆ ದೇವಾಲಯದ ದ್ವಾರದಿಂದ ಒಳಪ್ರವೇಶಿಸಿದ ತಕ್ಷಣವೇ ಕಾಣುತ್ತದೆ. ಈ ದೇವಾಲಯದಲ್ಲಿ ಸಿದ್ದೇಶ್ವರ ಸ್ವಾಮಿಯನ್ನು ಲಿಂಗರೂಪದಲ್ಲಿ ಅಲ್ಲದೇ ಉದ್ಭವ ಮೂರ್ತಿಯ ಅರ್ಜುನನಿಗೆ ಈಶ್ವರನು ಪಾಶುಪತಾಸ್ತ್ರ ಕೊಡುವ ಆಕಾರದಲ್ಲಿದೆ. ಪ್ರತಿವರ್ಷವೂ ಈ ದೇವಾಲಯದ ಉತ್ಸವ ಮೂರ್ತಿಯು ಅಮವಾಸ್ಯೆಯಂದು ರಾವಣೋತ್ಸವ, ಬಲಿಪಾಡ್ಯಮಿ, ಚಂದ್ರಮಂಡಲ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.