ಪ್ರವಾಸಿಗರಲ್ಲೊ೦ದು ಮನವಿ: ಬೆ೦ಗಳೂರಿನ ಅತ್ಯ೦ತ ಮನೋಹರವಾದ ಈ ವಿಲಕ್ಷಣಕ್ಕೆ ತಾಣಕ್ಕೆ ಭೇಟಿ ಇತ್ತಾಗ, ದಯವಿಟ್ಟು ಇಲ್ಲಿನ ಪರಿಸರವನ್ನು ಕಲುಷಿತಗೊಳಿಸಬೇಡಿರಿ. ರತ್ನದ೦ತಹ ಈ ಸು೦ದರ ತಾಣವನ್ನು ಸ್ವಚ್ಚತೆಯಿ೦ದ ಕಾಪಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಯುವಕರಿಗೆ ಬೈಕ್ ಓಡಿಸುವುದು, ಟ್ರಿಪ್ ಮಾಡುವುದು, ಚಾರಣಕ್ಕೆ ಹೋಗುವುದು ಎಂದರೆ ಎಲ್ಲಿಲ್ಲದ ಹುರುಪು, ಉತ್ಸಾಹ ಇರುತ್ತದೆ. ಅಂತಹ ಒಂದು ಉತ್ಸಾಹಕ್ಕೆ ಜೀವ ತುಂಬುವಂತಹ ಪ್ರದೇಶ ಇಲ್ಲಿದೆ ನೋಡಿ. ಇದು ಹೇಗಿದೆ ಎಂದರೆ ಒಬ್ಬೊಬ್ಬರೇ ಬೈಕ್ ಸವಾರಿಯಿಂದಲೇ ಈ ಬೆಟ್ಟದ ತುದಿಗೆ ಹೋಗಬಹುದು. ಸುಂದರ ಹಸಿರುವನದ ನಡುವೆ ತಂಪಾದ ಪರಿಸರದಲ್ಲಿ ಹೊಸಬಗೆಯ ಚಾರಣದ ಅನುಭವ ನಿಮ್ಮದಾಗಿಸಿಕೊಳ್ಳಬಹುದು. ಈ ಜಾಗ ಇರುವುದು ಎಲ್ಲೋ ಗಿರಿಧಾಮಗಳ ಮಧ್ಯದಲ್ಲಲ್ಲಾ. ಅದು ಇರುವುದು ಬೆಂಗಳೂರಿನ ಸಮೀಪ ಇರುವ ತುರಹಳ್ಳಿಯಲ್ಲಿ. ತುರಹಳ್ಳಿ ಕಾಡು ಕಾಡು ಎಂದರೆ ಅಯ್ಯೋ! ಎಂದು ಭಯಪಡಬೇಕಿಲ್ಲ. ಈ ಕಾಡು ಬೆಂಗಳೂರಿನಿಂದ 20 ಕಿ.ಮೀ. ದೂರದಲ್ಲಿದೆ. ಕನಕಪುರ ರಸ್ತೆ ಹತ್ತಿರ ಬರುವ ಈ ಕಾಡನ್ನು ಕರೀಶ್ಮಾ ಬೆಟ್ಟಗಳ ಸಾಲು ಎಂದು ಕರೆಯುತ್ತಾರೆ. ಬನಶಂಕರಿಯಿಂದ 13 ಕಿ.ಮೀ. ದೂರ ಸಾಗಬೇಕಷ್ಟೆ. ಅಲ್ಲದೆ ಈ ಕಾಡನ್ನು ನೈಸ್ ರಸ್ತೆಯಿಂದಲೂ ನೋಡಬಹುದು. ಇದನ್ನು ಕಾಡು ಎಂದು ಕರೆದ ಮಾತ್ರಕ್ಕೆ ಹುಲಿ, ಸಿಂಹಗಳಿರಬಹುದು ಎಂಬ ಭಯ ಬೇಡ. ಗುಳ್ಳೆ ನರಿ, ಮುಂಗುಸಿ, ಹಲ್ಲಿಯಂತಹ ಪ್ರಾಣಿಗಳಿವೆ ಅಷ್ಟೆ. ಅಲ್ಲದೆ ಕಾಡಿನ ತುದಿಗೆ ಹೋದರೆ ಒಂದು ಪುರಾತನ ಕಾಲದ ಚಿಕ್ಕ ಗುಡಿಯಿರುವುದು ನೋಡಬಹುದು. ಏನು ಮಾಡಬಹುದು ಕಾಡಿನ ತುದಿಗೆ ಏರುವಂತಹ ರಸ್ತೆ ಕಲ್ಲು ಗಿಡಗಳಿಂದ ಮುಕ್ತವಾಗಿದ್ದುದರಿಂದ ಇಷ್ಟ ಪಡುವವರು ಸೈಕಲ್ ತುಳಿದುಕೊಂಡೂ ಸಹ ಹೋಗಬಹುದು. ರಸ್ತೆ ಭಾಗವನ್ನು ಬಿಟ್ಟು ಉಳಿದ ಪ್ರದೇಶದಲ್ಲಿ ಎತ್ತರವಾದ ಬಂಡೆ, ವಿವಿಧ ಮರ-ಗಿಡಗಳ ರಾಶಿಯಿದೆ. ಬೆಟ್ಟದ ತುದಿಯಲ್ಲಿರುವ ಮರವೊಂದರ ಬಳಿ ನಿಂತು, ಬಂದ ದಾರಿಯನ್ನು ನೋಡಿದರೆ ಕಣ್ಣೆಲ್ಲಾ ತಿರುಗುವ ಅನುಭವವಾಗುತ್ತದೆ. ಪರಿಸರದ ದೃಶ್ಯವನ್ನು ಸೆರೆ ಹಿಡಿಯುವಾಗ ಆದಷ್ಟು ಕಾಳಜಿವಹಿಸುವುದು ಸೂಕ್ತ.
ನೀವು ಈ ಜಾಗಕ್ಕೆ ಹೋಗುವುದು ಖಚಿತವಾದರೆ ನೀರು, ಹಣ್ಣು, ತಿಂಡಿ, ಜ್ಯೂಸ್‍ಗಳನ್ನು ಕೊಂಡೊಯ್ಯಿರಿ. ಜೊತೆಗೆ ಪರಿಸರದ ಆ ಮುಗ್ಧ ಸೌಂದರ್ಯವನ್ನು ಸೆರೆ ಹಿಡಿಯಲು ಕ್ಯಾಮೆರಾ ನಿಮ್ಮ ಬಳಿ ಇರಲಿ. ಸೈಕಲ್ ಹಾಗೂ ಬೈಕ್ ಮೂಲಕ ಹೋದಾಗ ಟೈಯರ್ಗಳಿಗೆ ಮುಳ್ಳು-ಕಲ್ಲು ಚುಚ್ಚುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವುಗಳ ರಿಪೇರಿಗೆ ಬೇಕಾದ ಸಲಕರಣೆ ನಿಮ್ಮಬಳಿ ಇರಲಿ. ಜಾಗಿಂಗ್, ಟ್ರೆಕ್ಕಿಂಗ್ ಮಾಡಲು ಒಳ್ಳೆಯ ಜಾಗವಾದ್ದರಿಂದ ಅವುಗಳ ಅನುಭವ ಪಡೆಯದೆ ಹಿಂದಿರುಗಬೇಡಿ.
ತುರಹಳ್ಳಿಯು ಬೆ೦ಗಳೂರಿನ ಅತ್ಯುತ್ತಮ ಚಾರಣ ತಾಣಗಳ ಪೈಕಿ ಒ೦ದಾಗಿದ್ದು, ಏಕದಿನದ ಚಾರಣ ಸಾಹಸಕ್ಕೆ ಹೇಳಿಮಾಡಿಸಿದ೦ತಹ ಸ್ಥಳವಾಗಿದೆ! ಸ್ವಲ್ಪ ಎತ್ತರವನ್ನೇರಿದರೆ, ಬೆಟ್ಟದ ಮೇಲ್ಭಾಗವನ್ನು ತಲುಪುತ್ತೀರಿ ಹಾಗೂ ಇಲ್ಲಿ೦ದ ಬೆ೦ಗಳೂರು ನಗರದ 360 ಡಿಗ್ರಿ ನೋಟವನ್ನು ಕಣ್ತು೦ಬಿಕೊಳ್ಳಬಹುದು. ಬೆ೦ಗಳೂರು ನಗರದ ಈ ವಿಹ೦ಗಮ ನೋಟವನ್ನು ಕ೦ಡ ನೀವು ನಿಬ್ಬೆರಗಾಗುವುದರಲ್ಲಿ ಅನುಮಾನವೇ ಇಲ್ಲ.