ಹಿಮಾವದ್ ಗೋಪಾಲಸ್ವಾಮಿ ಬೆಟ್ಟ, ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿ 1450 ಮೀಟರ್ ಎತ್ತರದಲ್ಲಿದೆ ಮತ್ತು ವ್ಯಾಪಕವಾಗಿ ಕಾಡಿನಿಂದ ಕೂಡಿದ ಬೆಟ್ಟ ಇದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅತಿ ಎತ್ತರದ ಶಿಖರವಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿಗೆ ಸಮೀಪವಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ರಾಜಧಾನಿ ಬೆಂಗಳೂರಿನಿಂದ 220 ಕಿ.ಮೀ. ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಿಂದ 74 ಕಿ.ಮೀ. ದೂರದಲ್ಲಿದೆ. ಗುಂಡ್ಲುಪೇಟೆಯಿಂದ 20 ಕಿ.ಮೀ. ಊಟಿ ರಸ್ತೆಯಲ್ಲಿ ಸಾಗಿದರೆ ಅಲ್ಲಿ ಹಂಗಳ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಗಡೆ ಸಾಗಿದರೆ ಬೃಹದಾಕಾರದಲ್ಲಿ ಹರಡಿ ನಿಂತಿರುವ ಶ್ರೀ ಗೋಪಾಲಸ್ವಾಮಿ ಬೆಟ್ಟ ಎದುರಾಗುತ್ತದೆ.
ಹಿಮವದ್ ಗೋಪಾಲಸ್ವಾಮಿ ದೇಗುಲದ ಬಗ್ಗೆ ಹೇಳುವುದಾದರೆ ಇದಕ್ಕೆ ಸುಮಾರು ಏಳು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಇತಿಹಾಸದ ಪ್ರಕಾರ, ಹೊಯ್ಸಳ ದೊರೆ ಚೋಳ ಬಲ್ಲಾಳ ಈ ದೇವಾಲಯವನ್ನು ನಿರ್ಮಿಸಿದನೆಂದೂ ಬಳಿಕ ಮೈಸೂರಿನ ಒಡೆಯರ ಕಾಲದಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಲಾಯಿತು ಎನ್ನಲಾಗಿದೆ ಒಂದೇ ಸುತ್ತುಪೌಳಿಯಲ್ಲಿ ನಿರ್ಮಾಣವಾಗಿರುವ ದೇವಾಲಯ ವಿಶಾಲ ಆವರಣವನ್ನು ಹೊಂದಿದ್ದು, ಮುಖಮಂಟಪದಲ್ಲಿ ದಶಾವತಾರದ ಕೆತ್ತನೆಗಳು, ಬಲಿಪೀಠ, ಧ್ವಜ ಸ್ತಂಭಗಳು ಆಕರ್ಷಕವಾಗಿವೆ .
ಈ ಬೆಟ್ಟಕ್ಕೆ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಹೇಗೆ ಬಂತೆಂಬ ಪ್ರಶ್ನೆಗೆ ಇಲ್ಲಿನವರು ತಮ್ಮದೇ ಆದ ಉತ್ತರವನ್ನು ನೀಡುತ್ತಾರೆ. ಸ್ಥಳೀಯ ಹಿರಿಯರು ಹೇಳುವ ಪ್ರಕಾರ, ಈ ಬೆಟ್ಟಕ್ಕೆ ಹಿಂದೆ ಗೋವರ್ಧನಗಿರಿ ಎನ್ನುತ್ತಿದ್ದರಂತೆ ಇದಕ್ಕೆ ಕಾರಣ ಬೆಟ್ಟ ದೂರದಿಂದ ನೋಡಲು ಹಸುವಿನ ರೀತಿ ಕಾಣುತ್ತದೆಯಂತೆ. ಅಷ್ಟೇ ಅಲ್ಲ ಹಸಿರ ಸಂಪತ್ತಿನಿಂದ ಕಂಗೊಳಿಸುತ್ತಿದ್ದ ಬೆಟ್ಟಕ್ಕೆ ಹಿಂದಿನ ಕಾಲದಲ್ಲಿ ಗೋಪಾಲಕರು ದನ ಮೇಯಿಸಲು ಬರುತ್ತಿದ್ದರಂತೆ. ಗೋಪಾಲಕರು ಬರುತ್ತಿದ್ದರಿಂದ ಗೋವರ್ಧನಗಿರಿ ಗೋಪಾಲಸ್ವಾಮಿ ಬೆಟ್ಟವಾಯಿತಂತೆ. ರುಕ್ಮಿಣಿ, ಸತ್ಯಭಾಮೆಯರ ಸಹಿತ ಇಲ್ಲಿ ನೆಲೆಸಿರುವ ಶ್ರೀಕೃಷ್ಣನನ್ನು ಸಂತಾನ ಗೋಪಾಲಕೃಷ್ಣ ಎಂದೂ ಕರೆಯಲಾಗುತ್ತದೆ. ಇಲ್ಲಿನ ಮೂಲ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದರೆಂದೂ ಪ್ರತೀತಿಯಿದೆ. ಇನ್ನು ಗೋಪಾಲಸ್ವಾಮಿ ಬೆಟ್ಟವು ತ್ರಯಂಬಕಾದ್ರಿ, ನೀಲಾದ್ರಿ, ಮಂಗಳಾದ್ರಿ, ಶಂಖರಾದ್ರಿಗಿರಿ, ಹಂಸಾದ್ರಿ, ಗರುಡಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನಗಿರಿ ಮೊದಲಾದ ಬೆಟ್ಟಗಳಿಂದ ಸುತ್ತುವರೆದಿದ್ದು, ಹಂಸತೀರ್ಥ, ಪದ್ಮತೀರ್ಥ, ಶಂಖ ತೀರ್ಥ, ಚಕ್ರ ತೀರ್ಥ, ಗದಾ ತೀರ್ಥ, ಶಜ್ಞಾತೀರ್ಥ, ವನಮೂಲಿಕಾ ತೀರ್ಥ, ತೊಟ್ಲು ತೀರ್ಥ ಎಂಬ ಅಷ್ಟ ತೀರ್ಥಗಳಿವೆ. ಮಕ್ಕಳಿಲ್ಲದವರು ತೊಟ್ಲು ತೀರ್ಥದಲ್ಲಿ ಸ್ನಾನ ಮಾಡಿದರೆ ಮಕ್ಕಳಾಗುತ್ತವೆಂಬ ನಂಬಿಕೆಯೂ ಇಲ್ಲಿನವರಿಗಿದೆ. ವಿಶ್ವಪ್ರಸಿದ್ಧ ಮೈಸೂರು ದಸರಾ ಸಂದರ್ಭದಲ್ಲಿ ಮೇಲುಕೋಟೆ, ಶ್ರೀರಂಗಪಟ್ಟಣ ದೇವಸ್ಥಾನಗಳೊಂದಿಗೆ ಗೋಪಾಲಸ್ವಾಮಿ ಬೆಟ್ಟದಲ್ಲೂ ವಿಶೇಷ ಪೂಜೆ ನಡೆಯುವುದು ವಿಶೇಷ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ತನ್ನದೇ ಮಹತ್ವ ಹಾಗೂ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದೆ. ಅರಣ್ಯ ಇಲಾಖೆ ಈ ಪ್ರದೇಶವನ್ನು ವನ್ಯಜೀವಿ 1972ರ ಅನ್ವಯ ವನ್ಯಜೀವಿ ವಲಯ ಎಂದು ಘೋಷಣೆ ಮಾಡಿದ್ದು, ಭಾರತದಲ್ಲಿ ಅತೀ ಹೆಚ್ಚು ಹುಲಿ ಹೊಂದಿರುವ ಅರಣ್ಯಕ್ಕೆ ಈ ಬೆಟ್ಟ ಒಳಪಟ್ಟಿದೆ.
ರಾಜ್ಯ-ಹೊರರಾಜ್ಯಗಳ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ತಾಣಕ್ಕೆ ಯಾರೇ ಬಂದರೂ ಅವರದೇ ಭಾಷೆಯಲ್ಲಿ ಇಲ್ಲಿ ಕಾರ್ಯನಿರ್ವಹಿಸುವ ಅರ್ಚಕ ವೃಂದ ಮಾಹಿತಿ ನೀಡುತ್ತದೆ. ಇನ್ನು ಭಕ್ತಾಧಿಗಳಿಗೆ ಸ್ವಾದಿಷ್ಟಕರವಾದ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುತ್ತದೆ.