ಶಿವಗಂಗೆ ದೇವಾಲಯ

ಶಿವಗಂಗೆ ದೇವಾಲಯ

ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಶಿವಗಂಗೆ/ಶಿವಗಂಗಾ ಸ್ಥಳವು ಮಧ್ಯ ವಯಸ್ಕರಿಗೆ ಹಿರಿಯರಿಗೆ ಧಾರ್ಮಿಕ ಆಕರ್ಷಣೆಯಾಗಿದ್ದರೆ, ಯುವಜನಾಂಗದವರಿಗೆ ಚಾರಣ ಮಾಡಬಹುದಾದ ರೊಮಾಂಚಕ ತಾಣವಾಗಿದೆ. ಹೌದು, ಈ ಬೆಟ್ಟವನ್ನು ಏರಬಹುದಾಗಿದ್ದು ಪರ್ವತಾರೋಹಣ ಬಯಸುವವರಿಗೆ ಆದರ್ಶಮಯ ಸ್ಥಳವಾಗಿದೆ.

ಇದು ಬೆಂಗಳೂರು – ಪುಣೆ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬರುವ ದಾಬಸ್ಪೇಟೆ/ಡಾಬಸ್ ಪೇಟೆಯಿಂದ ಸುಮಾರು ಆರು ಕಿ.ಮೀ ದೂರವಿದ್ದರೆ, ತುಮಕೂರು ಪಟ್ಟಣದಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿದೆ. ಇದೊಂದು ಬೆಟ್ಟ ತಾಣವಾಗಿದ್ದು ಗಂಗಾಧರೇಶ್ವರ ದೇವಾಲಯದಿಂದಾಗಿ ಪ್ರಸಿದ್ಧಿ ಪಡೆದಿದೆ. ಬೆಟ್ಟದ ಪ್ರಾರಂಭದಲ್ಲಿಯೆ ಶಿವನಿಗೆ ಮುಡಿಪಾದ ಮುಖ್ಯವಾದ ದೇವಾಲಯವನ್ನು ನೋಡಬಹುದು. ಇದರ ವಿಶೇಷವೆಂದರೆ ಇಲ್ಲಿರುವ ಶಿವಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಅದು ಬೆಣ್ಣೆಯಾಗಿ ಪರಿವರ್ತಿತವಾಗುತ್ತದೆ ಎಂದು ಇಲ್ಲಿನ ಪ್ರತೀತಿ. ಅಲ್ಲದೆ ಆ ಬೆಣ್ಣೆಯಲ್ಲಿ ಔಷಧೀಯ ಗುಣಗಳಿರುತ್ತವೆ ಎಂದೂ ಸಹ ಹೇಳಲಾಗುತ್ತದೆ.

ಇನ್ನೂ ಕೆಲವರು ಹೇಳುವ ಪ್ರಕಾರ ಇಲ್ಲಿ ರಹಸ್ಯ ಸುರಂಗ ಮಾರ್ಗವೊಂದಿದ್ದು ಆ ಮಾರ್ಗವು ನೇರವಾಗಿ ಶ್ರೀರಂಗಪಟ್ಟಣಕ್ಕೆ ಸಂಪರ್ಕ ಕಲ್ಪಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕೆಲವರ ಪ್ರಕಾರ ಆ ಸುರಂಗ ಮಾರ್ಗವು ಇಲ್ಲಿಂದ 55 ಕಿ.ಮೀ ದೂರವಿರುವ ಬೆಂಗಳೂರಿನ ಪ್ರಖ್ಯಾತ ಗವಿ ಗಂಗಾಧರೇಶ್ವರನ ದೇವಾಲಯಕ್ಕೆ ಸಂಪರ್ಕ ಕಲ್ಪಿಸುತ್ತದಂತೆ.
ದೇವಾಲಯದ ಪಕ್ಕದಿಂದ ಬೆಟ್ಟವನ್ನು ಏರಬಹುದಾಗಿದ್ದು ಸ್ವಲ್ಪ ಮೇಲೆ ಏರಿದರೆ ಒಳಕಲ್ಲು ತೀರ್ಥ ಎನ್ನುವ ಒಂದು ಸ್ಥಳ ಸಿಗುತ್ತದೆ. ಇಲ್ಲಿರುವ ಒಳಕಲ್ಲಿನಲ್ಲಿ ವರ್ಷದ 365 ದಿನಗಳೂ ನೀರು ದೊರೆಯುತ್ತದೆ. ಕಡಿದಾದ ಬೆಟ್ಟವನ್ನು ಏರುತ್ತಾ ಸಾಗಿದರೆ ಒಂದು ಎತ್ತರವಾದ ಬಂಡೆಯ ಮೇಲೆ ನಂದಿಯ ವಿಗ್ರಹವಿರುವುದನ್ನು ಕಾಣಬಹುದು. ಇದನ್ನು ಪ್ರದಕ್ಷಿಣೆ ಹಾಕುವುದೆ ಒಂದು ಸಾಹಸದ ಕೆಲಸ.