ಕೊಡಗಿನಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆಯೇ ನಿಸರ್ಗ ಹಸಿರ ಹೊದಿಕೆಯನ್ನೊದ್ದು ಥಳಥಳಿಸುತ್ತಿದ್ದರೆ ಬೆಟ್ಟದ ಮೇಲಿನ ಗುಡ್ಡದ ಕೆಳಗಿನ ಹೆಬ್ಬಂಡೆಗಳ ಮೇಲೆ ಜಲಪಾತಗಳು ಮೈಕೈ ತುಂಬಿಕೊಂಡ ಬೆಡಗಿಯರಂತೆ ವಯ್ಯಾರದಿಂದ ಬಳುಕುತ್ತವೆ. ಕೊಡಗಿನಲ್ಲಿ ಹಲವಾರು ರುದ್ರರಮಣೀಯ ಜಲಪಾತಗಳಿವೆ. ಇವುಗಳ ಪೈಕಿ ಕೋಟೆ ಅಬ್ಬಿ ಜಲಪಾತ ಒಂದಾಗಿದ್ದು
ಸಾಮಾನ್ಯವಾಗಿ ಕೊಡಗಿನಲ್ಲಿ ಮಳೆ ಬೀಳುತ್ತಿದ್ದಂತೆಯೇ ಬೇಸಿಗೆಯ ಬಿಸಿಲಿಗೆ ಸೊರಗಿ ಹೆಬ್ಬಂಡೆಯ ಮಧ್ಯೆ ಅದೃಶ್ಯವಾಗಿ ಹೋದ ಎಲ್ಲಾ ಜಲಧಾರೆಗಳು ಮರುಜೀವ ಪಡೆಯುತ್ತವೆ. ಈ ಸಂದರ್ಭ ನೋಡಿದರೆ ಹೆಬ್ಬಂಡೆಯ ಮೇಲೆ ಬೆಳ್ಳಿ ಕರಗಿ ಸುರಿಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ. ಹಾಗೆನೋಡಿದರೆ ಮಡಿಕೇರಿಯಲ್ಲಿ ಮಳೆ ಸುರಿದರೆ ಅಬ್ಬಿ ಜಲಪಾತ ಭೋರ್ಗರೆಯುತ್ತ ಮಡಿಕೇರಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಕೋಟೆ ಅಬ್ಬಿ ಜಲಪಾತ ನಿಜಕ್ಕೂ ಒಂದು ಮೋಹಕ ಜಲಪಾತವೇ… ಈ ಜಲಪಾತವನ್ನು ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯವಿಲ್ಲ .
ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ , ಜೀಪು ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದು. … ಅಂಕುಡೊಂಕಾದ ರಸ್ತೆಯಲ್ಲಿ ಕಾಡು, ಕಾಫಿ, ಏಲಕ್ಕಿ ತೋಟದ ನಡುವೆ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿದ್ದರೆ ದಾರಿ ಸಾಗುವುದೇ ಗೊತ್ತಾಗುವುದಿಲ್ಲ. ಇನ್ನೇನು ಕೆಲವೇ ಕಿ.ಮೀ. ಅಂತರಗಳಲ್ಲಿ ಜಲಪಾತ ಇದೆ ಎನ್ನುವುದು ಭೋರ್ಗರೆಯುವ ಸದ್ದಿಗೆ ಗೊತ್ತಾಗಿ ಬಿಡುತ್ತದೆ. ಗುಡ್ಡದಲ್ಲಿ ತೋಟದ ನಡುವೆ ರಭಸದಿಂದ ಭೋರ್ಗರೆಯುತ್ತಾ ಹರಿಯುವ ನದಿ ನಮಗೆ ರಸ್ತೆಯಿಂದಲೇ ಕಾಣಸಿಗುತ್ತದೆ. ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲಿಯೂ ಮಳೆಗಾಲದಲ್ಲಿ ಇದರ ರೌದ್ರಾವತಾರವನ್ನು ಹತ್ತಿರದಿಂದ ನೋಡಿದರೆ ಆ ಸುಂದರ ಕ್ಷಣಗಳನ್ನು ಖಂಡಿತಾ ಮರೆಯಲಾರರು.