ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ನಂಜನಗೂಡು ಮೈಸೂರಿನಿಂದ ಸುಮಾರು 23 ಕಿ.ಮೀ ದೂರದಲ್ಲಿದೆ. ಇದು ಕರ್ನಾಟಕದ ಒಂದು ಪ್ರಸಿದ್ಧ ಪ್ರವಾಸಿತಾಣವಾಗಿದೆ. ನಂಜನಗೂಡು ಕಪಿಲ ನದಿಯ ದಂಡೆಯಲ್ಲಿರುವ ಒಂದು ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಪಟ್ಟಣವಾಗಿದ್ದು ಇಲ್ಲಿರುವ ಶ್ರೀಕಂಠೇಶ್ವರ ದೇವಾಲಯವು ಇಡೀ ಕರ್ನಾಟಕದಲ್ಲೇ ಬಹಳ ಪ್ರಸಿದ್ಧಿ ಪಡೆದಿದೆ. ನಂಜನಗೂಡು ಪ್ರಸಿದ್ಧವಾಗಿರುವುದು ಶ್ರೀಕಂಠೇಶ್ವರ (ನಂಜುಂಡೇಶ್ವರ) ದೇವಾಲಯವು ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಇದು ಊರಿನ ಪೂರ್ವದ ಅಂಚಿನಲ್ಲಿ ಕಪಿಲಾ ಮತ್ತು ಗುಂಡ್ಲುಹೊಳೆಯ ಸಂಗಮದ ಬಳಿ ಪೂರ್ವಾಭಿಮುಖವಾಗಿದೆ. ನದಿಗಳಲ್ಲಿ ಪ್ರವಾಹ ಬಂದಾಗ ದೇವಾಲಯದಿಂದ ಕೇವಲ ತೊಂಬತ್ತು ಮೀಟರುಗಳಷ್ಟು ದೂರದವರೆಗೆ ಸಂಗಮದಲ್ಲಿ ನೀರು ಬರುತ್ತದೆ. ಶ್ರೀಕಂಠೇಶ್ವರ ದೇವಾಲಯ ದ್ರಾವಿಡ ಶೈಲಿಯ ಕಟ್ಟಡ. ಇದು 117 ಮೀ. ಉದ್ದ, 48 ಮೀ. ಅಗಲ ಇದೆ. ಇದರಲ್ಲಿ 147 ಕಂಬಗಳಿವೆ.ಇದನ್ನು ಕರ್ನಾಟಕದಲ್ಲೇ ಅತ್ಯಂತ ದೊಡ್ಡ ದೇವಸ್ಥಾನ ಎನ್ನಲಾಗುತ್ತದೆ
ಇಡೀ ದೇವಾಲಯ ಒಂದು ಕಾಲದ ರಚನೆಯಲ್ಲ. ದೇವಾಲಯದ ಬೆಳವಣಿಗೆಯಲ್ಲಿ ಕನಿಷ್ಠ ನಾಲ್ಕು ಘಟ್ಟಗಳನ್ನು ಗುರುತಿಸಬಹುದು. ಶ್ರೀಕಂಠೇಶ್ವರ ಲಿಂಗ, ಗರ್ಭಗುಡಿ ಪ್ರದಕ್ಷಿಣಾಪಥ ಮತ್ತು ಒಳಮಂಟಪ ಬಹು ಪ್ರಾಚೀನವಾದುವು. ಈ ಭಾಗವನ್ನು ಗಂಗರ ಅಥವಾ ಚೋಳರ ಕಾಲದಲ್ಲಿ 10-11ನೆಯ ಶತಮಾನಗಳಲ್ಲಿ ಕಟ್ಟಿರಬಹುದೆಂಬುದನ್ನು ಇದರ ಲಕ್ಷಣಗಳು ಸೂಚಿಸುತ್ತವೆ. ಇದರ ಮುಂಭಾಗದಲ್ಲಿರುವ ಮಂಟಪದಲ್ಲಿ ವಿವಿಧ ಮಾದರಿಯ ಕಂಬಗಳಿವೆ. ಇದನ್ನು ಹೊಯ್ಸಳರ ಕಾಲದಲ್ಲಿ ಸು. 13ನೆಯ ಶತಮಾನದಲ್ಲಿ ರಚಿಸಿರಬಹುದೆಂಬುದನ್ನು ಈ ಕಂಬಗಳ ರೀತಿಗಳಿಂದ ಊಹಿಸಬಹುದು. ಈ ಭಾಗದ ಮುಂದಿರುವ ಬಲಿಪೀಠವೂ ಬಹುಶಃ ಈ ಕಾಲದ್ದಾಗಿದ್ದು , ಒಳಗಿನ ಮಹಾದ್ವಾರದ ಕಲ್ಲಿನ ಭಾಗದಲ್ಲಿ ಇಕ್ಕೆಲದಲ್ಲೂ ಹಂಪೆಯ ರಚನೆಗಳನ್ನು ಹೋಲುವ ಕಂಬಗಳಿವೆ ಮೇಲಿನ ಗಾರೆಯ ಗೋಪುರ ವಿನ್ಯಾಸದಲ್ಲೂ ವಿಜಯನಗರ ಶೈಲಿಯನ್ನು ಗುರುತಿಸಬಹುದು. ದೇವಾಲಯದಲ್ಲಿ ಕೃಷ್ಣದೇವರಾಯನ ಒಂದು ದತ್ತಿಶಾಸನವೂ ಇರುವುದರಿಂದ ಈ ಮಹಾದ್ವಾರ ಮತ್ತು ಗೋಪುರ ಅವನ ಕಾಲದ ರಚನೆಯಿರಬಹುದು ಎನ್ನಲಾಗುತ್ತದೆ.
ದೇವಾಲಯದಲ್ಲಿ ಸುಮಾರು 200ಕ್ಕೂ ಹೆಚ್ಚು ವಿಗ್ರಹಗಳು ಪ್ರತಿಷ್ಠಾಪಿತವಾಗಿವೆ. ಇವುಗಳಲ್ಲಿ ಅರ್ಧದಷ್ಟು ಲಿಂಗಗಳು. ನಂಜುಂಡೇಶ್ವರ ಲಿಂಗ ಹಳೆಯದು; ಪೀಠಯುತವಾಗಿ ಸುಮಾರು 9 ಮೀ. ಎತ್ತರವಿದೆ. ಇತರ ಲಿಂಗಗಳ ಪೈಕಿ ಹೆಚ್ಚಿನವು ಬೇರೆಬೇರೆ ಕಾಲಗಳಲ್ಲಿ ಸ್ಥಾಪಿತವಾದವು. ಹೆಚ್ಚಿನವು ಪ್ರಾಕಾರದ ಗೋಡೆಗೆ ಸೇರಿದಂತಿರುವ ಒಳಸಾಲಿನಲ್ಲಿವೆ. ಗರ್ಭಗುಡಿಯ ಸಭಾಮಂಟಪದಲ್ಲಿಯೂ ದೇವಾಲಯದ ಈಶಾನ್ಯ ಮತ್ತು ವಾಯವ್ಯ ಭಾಗದ ಕೋಣೆಗಳಲ್ಲಿಯೂ ಅಲ್ಲಲ್ಲಿ ಬಿಡಿಬಿಡಿಯಾಗಿಯೂ ಕೆಲವು ಲಿಂಗಗಳು ಸ್ಥಾಪಿತವಾಗಿವೆ. ನಾರಾಯಣ ಮತ್ತು ಪಾರ್ವತಿ ಗುಡಿಗಳಲ್ಲಿರುವ ಮೂಲ ವಿಗ್ರಹಗಳು ಸುಮಾರು 13-14ನೆಯ ಶತಮಾನದವು. ಪಾರ್ವತಿ ಸುಂದರ ಶಿಲ್ಪ. ಇದರಲ್ಲಿ ಹೊಯ್ಸಳ ಶೈಲಿಯ ಛಾಯೆಯನ್ನು ಕಾಣಬಹುದು.
ಈ ಪಟ್ಟಣವು ಇಲ್ಲಿ ನೆಲೆಗೊಂಡಿರುವ ದೈವವಾದ ನಂಜುಂಡೇಶ್ವರನಿಂದ ನಂಜನಗೂಡು ಎಂದು ಹೆಸರು ಪಡೆಯಿತು. ಕ್ಷೀರಸಾಗರ ಮಂಥನ ಮಾಡಿದಾಗ ಹೊರಬಂದ ವಿಷದಿಂದ ಭೂಮಿಯ ಜೀವಸಂಕುಲವನ್ನು ರಕ್ಷಿಸಲು ಶಿವನು ಆ ವಿಷವನ್ನು ಕುಡಿದು ನಂಜುಂಡನಾಗಿ ಈ ಕ್ಷೇತ್ರದಲ್ಲಿ ನೆಲೆಸಿದನು ಎಂಬ ಪ್ರತೀತಿ ಇದೆ. ಇಲ್ಲಿ ಮಾಡುವ ತೀರ್ಥ ಸ್ನಾನ ಮತ್ತು ದೈವದ ದರ್ಶನ ಪಾಪ ವಿಮೋಚಕ ಗುಣವುಳ್ಳದೆಂದು ಹೇಳಲಾಗುತ್ತದೆ.
ತಲುಪುವುದು ಹೇಗೆ? ಬೆಂಗಳೂರಿನಿಂದ 163 ಕಿ.ಮೀ ಮತ್ತು ಮೈಸೂರಿನಿಂದ 30 ಕಿ.ಮೀ ದೂರದಲ್ಲಿ ಇರುವ ನಂಜನಗೂಡಿಗೆ ರಸ್ತೆ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಇದು ಕೇವಲ ತೀರ್ಥಕ್ಷೇತ್ರವೆಂದಷ್ಟೆ ಅಲ್ಲದೆ, ಮಿತವ್ಯಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಾಣವಾಗಿದೆ.