ಬೀದರ್ ಕೋಟೆ

ಬೀದರ್  ಕೋಟೆ

ಬೀದರ್, ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆಯಾಗಿದೆ. ಬೀದರ್ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಪ್ರಮುಖ ಸ್ಥಳಗಳ ಪೈಕಿ ಒಂದಾಗಿದೆ. ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಬೀದರ್ ನಗರದಲ್ಲಿ ಬಹಮನಿ ಸುಲ್ತಾನರಿಂದ ಕಟ್ಟಲ್ಪಟ್ಟ ಕೋಟೆಯನ್ನು ಕಾಣಬಹುದಾಗಿದೆ

ಹಿಂದೆ ಬೀದರ್ ಜಿಲ್ಲೆಯು ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಈ ಸಂದರ್ಭದಲ್ಲಿ ಇವರ ಸಾಮ್ರಾಜ್ಯದಲ್ಲಿ ಬೀದರ್, ಗೋಲ್ಕೊಂಡಾ, ಬಿಜಾಪುರ, ಗುಲ್ಬರ್ಗ ಮತ್ತು ಬಿರಾರ್ ಸಂಸ್ಥಾನಗಳೂ ಸೇರಿಕೊಂಡಿದ್ದವು ಎಂಬುದನ್ನು ಗಮನಿಸಬಹುದು. ಪ್ರಸ್ತುತ ಬೀದರ್ ಕೋಟೆಯ ಇತಿಹಾಸವನ್ನು ಅಲ್ ಆ ಉದ್ ದಿನ್ ಬಹಮನ್ ಶಾ ನ ಮೂಲಕ ತಿಳಿಯಬಹುದಾಗಿದೆ. ಈತ ಬಹಮನಿ ಸುಲ್ತಾನರ ಮೊದಲ ರಾಜನಾಗಿದ್ದನು ಹಾಗೂ ತನ್ನ ರಾಜಧಾನಿಯನ್ನು ಗುಲ್ಬರ್ಗ (ಕಲಬುರಗಿ) ದಿಂದ ಬೀದರ್ ಗೆ ಸ್ಥಳಾಂತರಿಸಿದ್ದನು.

ಬಹಮನಿ ಸುಲ್ತಾನರ ಸಾಮ್ರಾಜ್ಯವು ಸ್ಥಾಪಿತವಾದ ನಂತರ ಆ ಸಮಯದಲ್ಲಿ ಅಂದರೆ 14 ನೇಯ ಶತಮಾನದಲ್ಲಿ ಈ ಭಾಗಗಳಲ್ಲಿ ನಿರ್ಮಿತವಾದ ರಚನೆಗಳಲ್ಲಿ ಪರ್ಷಿಯನ್ ಸಂಸ್ಕೃತಿಯ ಪ್ರಭಾವವಿರುವುದನ್ನು ಗಮನಾರ್ಹವಾಗಿ ಕಾಣಬಹುದು. ಅಂತೆಯೆ ಬೀದರ್ ಕೋಟೆಯಲ್ಲೂ ಸಹ ಪರ್ಷಿಯನ್ ಛಾಯೆಯನ್ನು ಅಲ್ಲಲ್ಲಿ ಕಾಣಬಹುದಾಗಿದೆ. ಪ್ರಸ್ಥ ಭೂಮಿಯ ಒಂದು ಕೊನೆಯಲ್ಲಿ ನಿರ್ಮಾಣಗೊಂಡ ಬೀದರ್ ಕೋಟೆಯು ಸ್ಪಷ್ಟವಾಗಿರದ ಚತುರ್ಭುಜಾಕೃತಿಯಲ್ಲಿದೆ. ಕೋಟೆ ಸಂಕೀರ್ಣವು 1.20 ಕಿ.ಮೀ ಉದ್ದ ಹೊಂದಿದ್ದರೆ ಅಗಲವು ಸುಮಾರು 0.80 ಕಿ.ಮೀ ಗಳಷ್ಟಿದೆ.

ಈ ವಿಶಾಲವಾದ ಬೀದರ್ ಕೋಟೆಯಲ್ಲಿ ಕೆಲವು ಮಹತ್ತರ ಅಂಗಗಳನ್ನು ಕಾಣಬಹುದಾಗಿದೆ. ಇಂದು ಇವೆಲ್ಲವೂ ಪ್ರವಾಸಿ ಆಕರ್ಷಣೆಗಳಾಗಿ ಅಂದಿನ ಕಾಲದ ವಾಸ್ತುಶಿಲ್ಪ, ಸಂಸ್ಕೃತಿ ಹಾಗೂ ಧರ್ಮಾಚರಣೆಯ ಕುರಿತು ಸೂಕ್ಷ್ಮವಾಗಿ ವಿವರಿಸುತ್ತವೆ. ತಖ್ತ್ ಮಹಲ್. ಗದ್ದಿಗೆ ಅರಮನೆ ಎಂದು ಇದನ್ನು ಅರ್ಥೈಸಬಹುದಾಗಿದ್ದು, ಬೀದರ್ ಕೋಟೆಯ ಒಂದು ಭಾಗವಾಗಿದೆ ಈ ಅರಮನೆ. ಈ ಅರಮನೆಯ ವಾಸ್ತುಶಿಲ್ಪವು ಇಂಡೋ -ಇಸ್ಲಾಮಿಕ್ ಶೈಲಿಯಲ್ಲಿರುವುದನ್ನು ಗಮನಿಸಬಹುದಾಗಿದೆ

ರಂಗೀನ್ ಮಹಲ್, ಕೋಟೆಯ ಮತ್ತೊಂದು ಭಾಗವಾಗಿರುವ ಈ ಅರಮನೆಯಲ್ಲಿ ಬಗೆ ಬಗೆಯ ವರ್ಣಗಳು ಬಳಸಲ್ಪಟ್ಟಿರುವುದನ್ನು ಕಾಣಬಹುದಾಗಿದೆ. ಅಂತೆಯೆ ಇದಕ್ಕೆ ರಂಗೀನ್ ಮಹಲ್ ಎಂಬ ಹೆಸರು ಬಂದಿದೆ. ಈ ಅರಮನೆಯು ಅಲಿ ಬರೀದ್ ಶಾ ನಿಂದ ನಿರ್ಮಾಣಗೊಂಡಿದೆ. ಐತಿಹಾಸಿಕವಾಗಿ ಅತಿ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಸ್ಮಾರಕಗಳಲ್ಲಿ ರಾಜ್ಯದಲ್ಲೆ ರಂಗೀನ್ ಮಹಲ್ ಕೂಡ ಮಂಚೂಣಿಯಲ್ಲಿದೆ ಎಂದು ನಂಬಲಾಗಿದೆ. ಈ ಮಹಲ್ ವಿಶಾಲವಾದ ಕೊಣೆ ಹೊಂದಿದ್ದು ಪ್ರವಾಸಿಗರು ಇಲ್ಲಿ ವಾಸ್ತುಶಿಲ್ಪದ ಅಗಾಧತೆಯನ್ನು ಆಸ್ವಾದಿಸಬಹುದಾಗಿದೆ. 

ಬೀದರ್ ಕೋಟೆಯ ಪ್ರಾಂಗಣದಲ್ಲಿರುವ ಗಗನ್ ಮಹಲ್ ಮತ್ತೊಂದು ಸುಂದರ ರಚನೆಯಾಗಿದೆ. ಎರಡು ಸಭಾಂಗಣಗಳನ್ನು ಇಲ್ಲಿ ಕಾಣಬಹುದಾಗಿದ್ದು ಉದ್ದ ರಚನೆಗಳ ಸುಂದರತೆಯನ್ನು ಇಲ್ಲಿ ಸೊಗಸಾಗಿ ವಿನ್ಯಾಸಿಸಿ ನಿರ್ಮಿಸಲಾಗಿದೆ ಎಂದು ಹೇಳಬಹುದು.